February 6, 2015

ಹಸಿವು ಮತ್ತು ಕಳ್ಳತನ



ಅಮವಾಸ್ಸೆ ಕತ್ತಲು, ಹಟ್ಟಿಯೆಲ್ಲ ಬರಿದು
ಹಸಿದ
ಹೊಟ್ಟೆಗಳು
ಊರಾಚೆ ಗೌಡನ ಹೊಲದ ಕಡ್ಲೆಕಾಯಿ ಗಿಡಗಳ
ಹಾದಿ ಹಿಡಿದು ಹೊರಟವು;
ಕತ್ತಲಲ್ಲಿ ತಡಕಿ, ಹುಡುಕಿ
ಕಡ್ಲೆಕಾಯಿ ಗಿಡಗಳ ಕಿತ್ತು ತಂದವು
ಹಟ್ಟಿಯೊಳಗೆ  ಹಸಿವು ನೀಗುವ ಸಂಭ್ರಮದಲ್ಲೇ
ನುಗ್ಗಿ ಬಂದವು ಗೌಡನ ಆಳುಗಳು
ಹಟ್ಟಿಯನ್ನೆಲ್ಲಾ ಕೆಡವಿ, ಕೊಡವಿ
ಸುಲಿದ ಬೀಜ, ಬಿಡಿಸಿದ ಕಡಲೆಕಾಯಿ,
ತಿನ್ನುತ್ತಿದ್ದ ಬಾಯಿಗಳಿಂದ ಕಸಿದು,  ಹೊಡೆದು ಬಡಿದು
ಎಳೆದೊಯ್ದರು ಪೋಲೀಸ್ ಸ್ಟೇಷನ್ನಿಗೆ
ಅಲ್ಲಿಂದ ಮುಂದೆ ಕೋರ್ಟಿಗೆ
ಜಡ್ಜ್ ಸಾಹೇಬರು ಕೇಳಿದರು
ಏನ್ರಪ್ಪಾ
ಕಡಲೆಕಾಯಿ ಕದ್ರಂತೆ ಹೌದಾ?
ಸ್ವಾಮಿ,  ನಾವಲ್ಲ,..;  ಹಸಿವು,  
 ಹಸಿವು ನಮ್ಮದಲ್ಲ, ಕದ್ದವರು ನಾವಲ್ಲ
ನಮ್ಮನ್ನು ಬಿಡಿ, ನಾವು ಅಮಾಯಕರು...
_____________________________________
                        -  ಭಾಸ್ಕರ್ ನರಸಿಂಹಯ್ಯ